ಬೆಳ್ತಂಗಡಿಯ ಹೆಮ್ಮೆಯ ಪುತ್ರಿ ಉಷಾರಾಣಿ ಅವರು ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕ
ಕರ್ನಾಟಕದ ಪ್ರಥಮ ಜೈನ ಮಹಿಳಾ ನ್ಯಾಯಮೂರ್ತಿ ಎಂಬ ಐತಿಹಾಸಿಕ ಗೌರವದತ್ತ ಹೆಜ್ಜೆ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಹೆಮ್ಮೆಯ ಪುತ್ರಿ, ಮೈಸೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿರುವ ಉಷಾರಾಣಿ ಅವರು ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿಯಾಗಿ ನೇಮಕಗೊಳ್ಳಲು ಸುಪ್ರೀಂಕೋರ್ಟ್ ಕೊಲಿಜಿಯಂನ ಅನುಮೋದನೆ ಪಡೆದಿದ್ದಾರೆ. ಈ ಮೂಲಕ ಕರ್ನಾಟಕ ಹೈಕೋರ್ಟ್ನ ಪ್ರಥಮ ಜೈನ ಮಹಿಳಾ ನ್ಯಾಯಮೂರ್ತಿ ಎಂಬ ಐತಿಹಾಸಿಕ ಗೌರವಕ್ಕೆ ಅವರು ಪಾತ್ರರಾಗಲಿದ್ದಾರೆ.
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಕೊಲಿಜಿಯಂ ಸೆಪ್ಟೆಂಬರ್ 10ರಂದು ಗುರುವಾರ ನಡೆದ ಸಭೆಯಲ್ಲಿ ಕರ್ನಾಟಕ ಹೈಕೋರ್ಟ್ಗೆ ಉಷಾರಾಣಿ ಸೇರಿದಂತೆ ಮೂವರು ನ್ಯಾಯಾಂಗ ಅಧಿಕಾರಿಗಳನ್ನು ನ್ಯಾಯಮೂರ್ತಿಗಳಾಗಿ ನೇಮಕ ಮಾಡಲು ಅನುಮೋದಿಸಿದೆ.

ನ್ಯಾಯಾಂಗ ಕ್ಷೇತ್ರದಲ್ಲಿ ದೀರ್ಘಕಾಲದ ಅನುಭವ ಹೊಂದಿರುವ ಉಷಾರಾಣಿ ಅವರು ತಮ್ಮ ವೃತ್ತಿಜೀವನದಲ್ಲಿ ವಿವಿಧ ಪ್ರಮುಖ ನ್ಯಾಯಾಂಗ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಮೈಸೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅವರು, ನ್ಯಾಯಾಂಗ ಕ್ಷೇತ್ರದಲ್ಲಿನ ತಮ್ಮ ಪ್ರಾಮಾಣಿಕತೆ, ದಕ್ಷತೆ ಹಾಗೂ ನಿಷ್ಪಕ್ಷಪಾತ ಕಾರ್ಯವೈಖರಿಯಿಂದ ಗಮನ ಸೆಳೆದಿದ್ದಾರೆ.

ಬೆಳ್ತಂಗಡಿ ತಾಲೂಕಿನವರಾದ ಉಷಾರಾಣಿ ಅವರು ಉಜಿರೆಯ ಎಸ್.ಡಿ.ಎಂ. ಕಾಲೇಜಿನ ಹಿರಿಯ ವಿದ್ಯಾರ್ಥಿನಿ. ಬೆಳ್ತಂಗಡಿಯಲ್ಲಿ ಹಿರಿಯ ವಕೀಲರು ಹಾಗೂ ಸಮಾಜಸೇವಕರಾಗಿ ಚಿರಪರಿಚಿತರಾಗಿದ್ದ ದಿವಂಗತ ನೇಮಿರಾಜ ಅವರ ಪುತ್ರಿಯಾಗಿರುವುದು ವಿಶೇಷ. ನ್ಯಾಯಾಂಗ ಸೇವೆಯಲ್ಲಿ ವಿವಿಧ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿರುವ ಉಷಾರಾಣಿ ಅವರು ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶೆ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಕರ್ನಾಟಕ ಲೋಕಾಯುಕ್ತದ ರಿಜಿಸ್ಟ್ರಾರ್ ಸೇರಿದಂತೆ ಹಲವು ಪ್ರಮುಖ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ನ್ಯಾಯದಾನದಲ್ಲಿ ನಿಷ್ಠೆ, ಕಾನೂನಿನ ಆಳವಾದ ಅರಿವು ಹಾಗೂ ಆಡಳಿತಾತ್ಮಕ ದಕ್ಷತೆಯನ್ನು ಮೈಗೂಡಿಸಿಕೊಂಡಿರುವ ಅವರ ಸೇವೆಯನ್ನು ಗುರುತಿಸಿ ಇದೀಗ ಹೈಕೋರ್ಟ್ ನ್ಯಾಯಮೂರ್ತಿ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ.

ಕರಾವಳಿಯ ಹೆಮ್ಮೆಗೆ ಮತ್ತೊಂದು ಗರಿ:
ಬೆಳ್ತಂಗಡಿಯ ನೆಲದಿಂದ ಹೊರಹೊಮ್ಮಿದ ಮಹಿಳೆಯೊಬ್ಬರು ರಾಜ್ಯದ ಉನ್ನತ ನ್ಯಾಯಾಂಗ ಪೀಠವನ್ನು ಅಲಂಕರಿಸುವ ಹಂತಕ್ಕೆ ತಲುಪಿರುವುದು ದಕ್ಷಿಣ ಕನ್ನಡ ಮಾತ್ರವಲ್ಲದೆ ಇಡೀ ಕರಾವಳಿಗೆ ಹೆಮ್ಮೆಯ ಸಂಗತಿಯಾಗಿದೆ. ಅದರಲ್ಲೂ ಕರ್ನಾಟಕ ಹೈಕೋರ್ಟ್ನ ಪ್ರಥಮ ಜೈನ ಮಹಿಳಾ ನ್ಯಾಯಮೂರ್ತಿ ಎಂಬ ವಿಶೇಷ ಗೌರವದೊಂದಿಗೆ ಉಷಾರಾಣಿ ಅವರ ಸಾಧನೆ ಮತ್ತಷ್ಟು ಮಹತ್ವ ಪಡೆದುಕೊಂಡಿದೆ.
ಅವರ ಈ ಐತಿಹಾಸಿಕ ಸಾಧನೆಗೆ ಬೆಳ್ತಂಗಡಿ, ದಕ್ಷಿಣ ಕನ್ನಡ ಸೇರಿದಂತೆ ವಿವಿಧ ವಲಯಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದ್ದು, ಮುಂದಿನ ನ್ಯಾಯಾಂಗ ಸೇವೆಗೆ ಶುಭ ಹಾರೈಕೆಗಳು ವ್ಯಕ್ತವಾಗುತ್ತಿವೆ.


