ವಿವಾಹ ವೇದಿಕೆಯಲ್ಲಿ ಸಮಾಜಮುಖಿ ಹೆಜ್ಜೆ – ‘ಗೋ ಸಮ್ಮಾನ್’ ಜಾಗೃತಿಗೆ ಬೆಂಬಲಿಸಿ ಅತಿಥಿಗಳ ಸಹಿ ಸಂಗ್ರಹ
ಬಂಟ್ವಾಳ: ವಿವಾಹ ಸಮಾರಂಭವೊಂದರಲ್ಲಿ ಕೇವಲ ಸಂಭ್ರಮಾಚರಣೆಗೆಷ್ಟೇ ಸೀಮಿತವಾಗದೆ, ಸಮಾಜಮುಖಿ ಹಾಗೂ ಗೋ ರಕ್ಷಣೆಯ ಜಾಗೃತಿ ಮೂಡಿಸುವ ವಿನೂತನ ಅಭಿಯಾನವೊಂದು ನಡೆಯುವ ಮೂಲಕ ಸಾರ್ವಜನಿಕರ ಗಮನ ಸೆಳೆದಿದೆ.


ಬಂಟ್ವಾಳ ತಾಲೂಕಿನ ರೆಂಜನ್ ಪದವಿನ ಶುಭಲಕ್ಷ್ಮೀ ಸಭಾಭವನದಲ್ಲಿ ಇತ್ತೀಚೆಗೆ ನಡೆದ ಜೇತೇಶ್ ಹಾಗೂ ಶರಣ್ಯ ಅವರ ವಿವಾಹ ಮಹೋತ್ಸವದಲ್ಲಿ ‘ಗೋ ಸಮ್ಮಾನ್’ ಅಭಿಯಾನದ ಭಾಗವಾಗಿ ಸಹಿ ಸಂಗ್ರಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮದುವೆಗೆ ಆಗಮಿಸಿದ್ದ ಅತಿಥಿಗಳು ಹಾಗೂ ಬಂಧು-ಮಿತ್ರರು ಈ ಅರ್ಥಪೂರ್ಣ ಕಾರ್ಯಕ್ಕೆ ವ್ಯಾಪಕ ಬೆಂಬಲ ವ್ಯಕ್ತಪಡಿಸಿ, ಉತ್ಸಾಹದಿಂದ ಸಹಿ ಹಾಕಿದರು.

ಈ ಶುಭ ಸಮಾರಂಭದಲ್ಲಿ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಗೋಸೇವಾ ವಿಭಾಗದ ಪ್ರಮುಖರಾದ ಗಂಗಾಧರ್, ಹಾಗೂ ಗೋ ಸಮ್ಮಾನ್ ಜಿಲ್ಲಾ ಸಹ ಪ್ರಭಾರಿ ಅಶೋಕ ಇಳಂತಿಲ ಸೇರಿದಂತೆ ಹಲವು ಗಣ್ಯರು ಭಾಗವಹಿಸಿ ಸಹಿ ಮಾಡುವ ಮೂಲಕ ಅಭಿಯಾನಕ್ಕೆ ಸಾಥ್ ನೀಡಿದರು.

ತಮ್ಮ ಜೀವನದ ಅತ್ಯಂತ ಮಹತ್ವದ ದಿನದಂದು ಗೋ ಸಂರಕ್ಷಣೆ ಮತ್ತು ಸಾಮಾಜಿಕ ಕಾಳಜಿಯ ಸಂದೇಶ ಸಾರಿದ ನವದಂಪತಿ ಜೇತೇಶ್ ಮತ್ತು ಶರಣ್ಯ ಅವರ ಈ ಶ್ಲಾಘನೀಯ ಪ್ರಯತ್ನಕ್ಕೆ ಗಣ್ಯರು ಹಾಗೂ ಸಾರ್ವಜನಿಕ ವಲಯದಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ.



